ಮತೀಯ ಶಿಕ್ಷಣ - 
	ಯಾವುದಾದರೂ ಒಂದು ಮತದ ಅಥವಾ ಅದರ ಒಂದು ಶಾಖೆಯ ತತ್ತ್ವ, ನಂಬಿಕೆ. ವ್ರತಾಚರಣೆ, ವಿಧಿ ಮುಂತಾದವನ್ನು ಕುರಿತ ಉಪದೇಶ (ರಿಲಿಜಿಯಸ್ ಇನ್‍ಸ್ಟ್ರಕ್ಷನ್). ನೈತಿಕ ಹಾಗೂ ಆದರ್ಶ ಸಾಧನೆಯ ಉದ್ದೇಶದಿಂದ ಒಂದು ಅಥವಾ ಹಲವು ಮತಗಳ ತತ್ತ್ವ ಮತ್ತು ಸಿದ್ಧಾಂತಗಳ ಬಗ್ಗೆ ನೀಡುವ ವಿವರಣೆ ವ್ಯಾಖ್ಯಾನಗಳಿಗೂ ಈ ಪದವನ್ನು ಬಳಸುವುದುಂಟು.

	ಪ್ರಾಚೀನಕಾಲದಲ್ಲಿ ಮತಪೀಠಗಳು ಈ ಶಿಕ್ಷಣದ ಕೇಂದ್ರಗಳಾಗಿದ್ದು ಪುರೋಹಿತರು ಮತ್ತು ಆಚಾರ್ಯರು ಇಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಧಾರ್ಮಿಕ ಜ್ಞಾನ ಮತ್ತು ವ್ರತಾಚರಣೆಗಳ ಪ್ರಚಾರ ಪ್ರಮುಖ ಅಂಶಗಳಾಗಿರುತ್ತಿದ್ದುವು. ಶಿಕ್ಷಣ ರಾಷ್ಟ್ರದ ಹೊಣೆಗಾರಿಕೆಗೆ ಬಂದಮೇಲೆ ಎಲ್ಲಿ ಅಧಿಕೃತಧರ್ಮ ಅಥವಾ ಮತ ಆಚರಣೆಯಲ್ಲಿತ್ತೊ ಅಲ್ಲಿಯ ಸಾರ್ವಜನಿಕ ಶಾಲೆಗಳಲ್ಲೂ ಆ ಮತದ ಬೋಧನೆಗೆ ಅವಕಾಶವಿತ್ತು. ಧಾರ್ಮಿಕ ಸಂಸ್ಥೆಗಳೇ ನಡೆಸುತ್ತಿದ್ದ ಶಾಲಾಕಾಲೇಜುಗಳಲ್ಲಿ ಆಯಾ ಮತೀಯ ಶಿಕ್ಷಣಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಶಿಕ್ಷಣ ಸಾರ್ವತ್ರಿಕ ವ್ಯಾಪ್ತಿ ಪಡೆದಂತೆ ಹಲವಾರು ಮತಗಳು ಅಸ್ತಿತ್ವದಲ್ಲಿರುವ ರಾಷ್ಟ್ರಗಳಲ್ಲಿ ಧಾರ್ಮಿಕ ಶಿಕ್ಷಣ ನೀಡುವುದು ಸಮಸ್ಯೆಯಾಯಿತು. ಸರ್ಕಾರದ ಶಾಲೆಗಳಲ್ಲೂ ಖಾಸಗಿ ಶಾಲೆಗಳಲ್ಲೂ ಯಾವ ಒಂದು ಮತದ ತತ್ತ್ವ ಸಿದ್ಧಾಂತಗಳನ್ನು ಬೋಧಿಸಿದರೂ ಇತರ ಮತದ ಮಕ್ಕಳಿಗೆ ಅದು ಅಹಿತವೆನಿಸಿ ಪೋಷಕರಿಂದ ಪ್ರತಿಭಟನೆ ಬರಲಾರಂಭಿಸಿತು. ಕೆಲವು ದೇಶಗಳಲ್ಲಿ ಮತೀಯ ಶಿಕ್ಷಣವೀಯುವಾಗ ಅನ್ಯಮತದ ವಿದ್ಯಾರ್ಥಿಗಳು ಹೊರಗುಳಿಯುವ ಅವಕಾಶ ಪಡೆದು ಕೊಂಡರು. ಇನ್ನು ಕೆಲವು ದೇಶಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಧಾರ್ಮಿಕ ಶಿಕ್ಷಣ ನೀಡುವುದನ್ನು ತೆಗೆದುಹಾಕಲಾಯಿತು. ಮತೀಯ ಶಾಲಾಕಾಲೇಜುಗಳಲ್ಲಿ ಅದನ್ನು ಬೋಧಿಸಲು ಅವಕಾಶವಿದ್ದರೂ ಅಲ್ಲಿರುವ ಎಲ್ಲರಿಗೂ ಹಿತವೆನಿಸುವಂತೆ ಸಾಮಾನ್ಯ ಅಂಶಗಳನ್ನು ಕುರಿತ ಧಾರ್ಮಿಕ ಶಿಕ್ಷಣಕ್ಕೆ ಅವಕಾಶ ನೀಡಲಾಯಿತು. ಅದಕ್ಕಾಗಿ ಸಂಬಂಧಿಸಿದವರೆಲ್ಲ ಸೇರಿ ಒಮ್ಮತದ ಪಠ್ಯಪುಸ್ತಕವನ್ನು ರೂಪಿಸಿಕೊಳ್ಳುವುದು ಆಚರಣೆಗೆ ಬಂದಿತು. 

	ಶಿಕ್ಷಣದ ಉದ್ದೇಶಗಳಲ್ಲಿ ವ್ಯಕ್ತಿಯ ಚಾರಿತ್ರ್ಯ ಅಥವಾ ನೈತಿಕ ಜೀವನದ ನಿರೂಪಣೆ ಒಂದು ಮುಖ್ಯ ಅಂಶ. ಅಂಥ ನೈತಿಕ ಜೀವನ ಬೆಳೆಸಲು ನೈತಿಕಶಿಕ್ಷಣ ಅಗತ್ಯ ಎಂಬುದನ್ನು ಎಲ್ಲರೂ ಒಪ್ಪಿರುವರು. ಎಲ್ಲ ಜಾಗತಿಕ ಧರ್ಮಗಳೂ ನೀತಿಯ ತಳಹದಿಯ ಮೇಲೆ ರೂಪುಗೊಂಡಿರುವುದರಿಂದ ಧಾರ್ಮಿಕ ಶಿಕ್ಷಣದ ಮೂಲಕ ಮಕ್ಕಳಲ್ಲಿ ನೀತಿನಿರೂಪಣೆ ಮಾಡುವುದು ಸ್ವಾಭಾವಿಕ ಎನಿಸಿತು. ಆದ್ದರಿಂದಲೇ ಪ್ರಾಚೀನ ಕಾಲದಿಂದಲೂ ಧಾರ್ಮಿಕ ಹಾಗೂ ನೈತಿಕ ಶಿಕ್ಷಣಗಳೆರಡೂ ಒಂದರೊಡನೊಂದು ಹಣೆದುಕೊಂಡೇ ಬಂದಿವೆ. ಧಾರ್ಮಿಕ ಸಂಸ್ಥೆಗಳೇ ಪ್ರಮುಖ ಶಿಕ್ಷಣಸಂಸ್ಥೆಗಳಾಗಿದ್ದಾಗ ಮತೀಯ ಶಿಕ್ಷಣ ಹಾಗೂ ಇತರ ಶಿಕ್ಷಣ ಒಟ್ಟಿಗೆ ಬೋಧನೆಯಾಗುತ್ತಿದ್ದುವು. ಸಾರ್ವತ್ರಿಕ ಶಾಲೆಗಳು ಬಳಕೆಗೆ ಬಂದು ಧಾರ್ಮಿಕ ಶಿಕ್ಷಣ ಮತೀಯ ಶಿಕ್ಷಣವಾಗಿ ಪರಿಣಮಿಸಿದಂತೆ ಅನ್ಯಮತದವರ ಸಮಸ್ಯೆ ತಲೆದೋರಿ ಕಡೆಗೆ ಎಲ್ಲ ಮತಗಳಿಗೂ ಅನ್ವಯಿಸಬಹುದಾದ ನೈತಿಕಾಂಶಗಳು ಆ ಸ್ಥಳವನ್ನು ಆಕ್ರಮಿಸಿದುವು.

	ಸಾರ್ವತ್ರಿಕ ಶಾಲೆಗಳು ಅಸ್ತಿತ್ವಕ್ಕೆ ಬರುವ ಮುನ್ನ ಪುರೋಹಿತರೂ ಧಾರ್ಮಿಕ ಗುರುಗಳೂ ಬೋಧಿಸುತ್ತಿದ್ದ ಶಿಕ್ಷಣದ ಬಿಡಿಭಾಗ ಧಾರ್ಮಿಕ ಶಿಕ್ಷಣವೇ ಎನಿಸಿತು. ಆಯಾ ಮತದ ಧರ್ಮಗ್ರಂಥಗಳ ಕಂಠಪಾಠ, ಮತಗಳ ವ್ರತಾಚರಣೆಗಳ ಅನುಷ್ಠಾನ ಇದೇ ಮತೀಯ ಶಿಕ್ಷಣದ ಸ್ವರೂಪಗಳಾಗಿದ್ದುವು. ಕಾಲಕ್ರಮದಲ್ಲಿ ಅನ್ಯಮತದವರು ಇರುತ್ತಿದ್ದ ಸಾರ್ವತ್ರಿಕ ಶಾಲೆಗಳಲ್ಲಿ ಅದು ಸಹ್ಯವೆನಿಸದೆ ಧಾರ್ಮಿಕ ಶಿಕ್ಷಣ ಬೋಧನೆ ಕೈಬಿಡುವುದು ಎಂದಾಯಿತು. ಧಾರ್ಮಿಕ ಶಿಕ್ಷಣ ನೀಡದೆ ಮಕ್ಕಳ ನೈತಿಕ ಜೀವನದಲ್ಲಿ ನಿಷ್ಠೆಯನ್ನು ರೂಪಿಸಲು ಆಗದು ಎಂಬ ಅಂಶವನ್ನು ಕಂಡುಕೊಂಡು ಮತ್ತೆ ಅದನ್ನು ಆಚರಣೆಗೆ ತರುವುದು, ಪ್ರತಿಭಟನೆಯೊದಗಿದಾಗ ತೆಗೆದುಹಾಕುವುದು-ಈ ರೀತಿ ನಡೆದುಕೊಂಡೇ ಬರುತ್ತಿದೆ. ಸದ್ಯದಲ್ಲಿ ಆ ವಿಷಯ ಶಿಕ್ಷಣ ಕ್ಷೇತ್ರದಲ್ಲಿ ಗೊಂದಲಕ್ಕೀಡಾಗಿರುವ ಒಂದು ಜಟಿಲ ಸಮಸ್ಯೆ ಎನಿಸಿದೆ. 

	ಭಾರತದಲ್ಲಿ ಧಾರ್ಮಿಕ ಹಾಗೂ ನೈತಿಕ ಶಿಕ್ಷಣ : ಪ್ರಾಚೀನ ಭಾರತದಲ್ಲಿ ಧಾರ್ಮಿಕ ಸಂಸ್ಥೆಗಳೂ ಮತ ಪೀಠಗಳೂ ಗುರುಕುಲಗಳೂ ಶಿಕ್ಷಣ ಕೇಂದ್ರಗಳಾಗಿದ್ದಾಗ ಹಾಗೂ ಒಂದೇ ಮತದ ವಿದ್ಯಾರ್ಥಿಗಳು ಈ ವಿಧದ ಶಿಕ್ಷಣಕ್ಕೆ ಬರುತ್ತಿದ್ದಾಗ ಆಯಾ ಮತದ ಪವಿತ್ರ ಗ್ರಂಥಗಳನ್ನು ಕಂಠಪಾಠ ಮಾಡುವುದು, ಮಂತ್ರಗಳನ್ನು ಕಲಿಸುವುದು, ವ್ರತಗಳನ್ನು ಆಚರಿಸುವುದು ಧಾರ್ಮಿಕ ಶಿಕ್ಷಣದ ಪ್ರಧಾನ ಅಂಶಗಳಾಗಿದ್ದುವು. ಜೊತೆಗೆ ಗುರುಗಳ ಸಚ್ಚಾರಿತ್ರ್ಯವೂ ವಿದ್ಯಾರ್ಥಿಗಳ ಮೇಲೆ ಸತ್ಪರಿಣಾಮ ಬೀರುತ್ತಿತ್ತು. ಇದು ವಿದ್ಯಾರ್ಥಿಗಳ ವ್ಯಕ್ತಿತ್ವ ಹಾಗೂ ಚಾರಿತ್ರ್ಯ ರೂಪುಗೊಳ್ಳುಲು ನೆರವಾಗುತ್ತಿತ್ತು. ಮಧ್ಯಯುಗದಲ್ಲೂ ಈ ಪದ್ಧತಿ ಮುಂದುವರಿಯುತ್ತ ಬಂತು. ಆದರೆ ಪಾಶ್ಚಾತ್ಯ ಶಿಕ್ಷಣಪದ್ಧತಿ ಆರಂಭವಾಗಿ ಕ್ರೈಸ್ತ ಪಾದ್ರಿಗಳು ಶಾಲೆಗಳನ್ನು ಆರಂಭಿಸಿ ಕ್ರೈಸ್ತಧರ್ಮ ಬೋಧನೆ ಹಾಗೂ ಅನ್ಯಮತಗಳ ವಿಡಂಬಣೆ ಆರಂಭಿಸಿದಾಗ ಭಾರತೀಯರಲ್ಲಿ ಪ್ರತಿಭಟನೆ ಮೂಡಿತು. ಇಂಗ್ಲಿಷರು ದೇಶವನ್ನು ಪೂರ್ಣವಾಗಿ ಆಕ್ರಮಿಸಿಕೊಂಡು ಜಾತ್ಯತೀತ ಲೌಕಿಕ ಶಿಕ್ಷಣ ಆರಂಭಿಸಿದ ಮೇಲೆ ಭಾರತೀಯರ ಅಸಮಾಧಾನ ಕಂಡ ಅವರು ಶಾಲಾಕಾಲೇಜುಗಳಲ್ಲಿ ಯಾವ ಧರ್ಮದ ಶಿಕ್ಷಣಕ್ಕೂ ಪ್ರೋತ್ಸಾಹ ನೀಡಲಿಲ್ಲ. ಆದರೆ ಧಾರ್ಮಿಕ ಶಿಕ್ಷಣದ ಮಹತ್ತ್ವವನ್ನು ಮಾತ್ರ ಕಡೆಗಣಿಸಲಿಲ್ಲ. ನಿಜ ಹೇಳುವುದಾದರೆ, ನೈತಿಕ ಶಿಕ್ಷಣಕ್ಕೆ ಧಾರ್ಮಿಕ ಶಿಕ್ಷಣ ಪೋಷಕವೆಂಬ ಅಂಶವನ್ನು ಅವರು ನೇಮಿಸಿದ 1882ರ ಶಿಕ್ಷಣ ಆಯೋಗ ಮುಕ್ತಕಂಠದಿಂದ ಒಪ್ಪಿಕೊಂಡಿತು. ಹಾಗೆಯೇ ಅನಂತರದ ಶಿಕ್ಷಣ ಆಯೋಗಗಳೂ ಸಮಿತಿಗಳೂ ಅದೇ ಅಭಿಪ್ರಾಯ ಎತ್ತಿಹಿಡಿದುವು. ಅಂಥ ಕೆಲವು ಆಯೋಗಗಳ ಹಾಗೂ ಸಮಿತಿಗಳ ಅಭಿಪ್ರಾಯ ಸಂಗ್ರಹಣೆ ಹೀಗಿದೆ; 

	1882ರಲ್ಲಿ ಅಂದಿನ ಸರ್ಕಾರ ರಚಿಸಿದ ಮೊತ್ತಮೊದಲ ಶಿಕ್ಷಣ ಆಯೋಗ ಧಾರ್ಮಿಕ ಶಿಕ್ಷಣವನ್ನು ಶಾಲೆಯ ಕಾರ್ಯಕ್ರಮಗಳಲ್ಲಿ ಒಂದಾಗಿ ಸೇರಿಸುವ ಅಗತ್ಯವನ್ನು ಎತ್ತಿಹಿಡಿದು ಮತಪೀಠಗಳು ತಮ್ಮ ಮತಕ್ಕೆ ಸಂಬಂಧಿಸಿದಂತೆ ಮಾತ್ರ ಬೋಧಿಸುವ ಸಂಕುಚಿತ ವಿಧಾನಕ್ಕಿಂತ ಹಲವಾರು ಮತದ ವಿದ್ಯಾರ್ಥಿಗಳಿರುವ ಶಾಲೆಯಲ್ಲಿ ಅದನ್ನು ಹೆಚ್ಚು ವಾಸ್ತವಿಕ ರೀತಿಯಲ್ಲಿ ಬೋಧಿಸಬಹುದೆಂದುವಾದಿಸಿ ಅದಕ್ಕೆ ಅಗತ್ಯವೆನಿಸುವ ಪಠ್ಯಪುಸ್ತಕಗಳನ್ನು ರಚಿಸಬೇಕೆಂದು ಸೂಚಿಸಿತು. ಅನಂತರ ಈ ಕಾರ್ಯಸಾಧ್ಯವಿಲ್ಲವೆಂದು ಸರ್ಕಾರವೇ ಕೈ ಬಿಟ್ಟಿತು.

	1944ರಲ್ಲಿ ಕೇಂದ್ರ ಶಿಕ್ಷಣ ಸಲಹಾ ಮಂಡಲಿ ನೇಮಿಸಿದ ಸಮಿತಿ ಧಾರ್ಮಿಕ ಶಿಕ್ಷಣವನ್ನು ಕಡ್ಡಾಯ ಮಾಡಬೇಕೆಂದು ಸೂಚಿಸಿತು. ಆದರೆ ಆ ಕಾರ್ಯವನ್ನು ಮತೀಯ ಸಂಸ್ಥೆಗಳಿಗೆ ಬಿಡುವುದು ಲೇಸೆಂದು ತೀರ್ಮಾನಿಸಿತು.

	ಬ್ರಿಟಿಷ್ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಅದು ಇಲ್ಲಿಯವರ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿ ನಡೆಯಬೇಕಾದೀತೆಂಬ ಕಾರಣದಿಂದ ಆ ಬಗ್ಗೆ ಅಂದಿಗಂದಿಗೆ ಬರುತ್ತಿದ್ದ ಸಲಹೆಗಳನ್ನು ಉದ್ದೇಶಪೂರ್ವಕವಾಗಿ ಕೈಬಿಡುತ್ತಿತ್ತು. ಸ್ವಾತಂತ್ರ್ಯಾನಂತರ ರಾಷ್ಟ್ರ ಧಾರ್ಮಿಕ ಶಿಕ್ಷಣದ ಬಗ್ಗೆ ತೀವ್ರವಾಗಿ ಆಲೋಚಿಸ ಹತ್ತಿತು. 1948ರಲ್ಲಿ ಭಾರತ ಸರ್ಕಾರ ನೇಮಿಸಿದ ವಿಶ್ವವಿದ್ಯಾಲಯ ಶಿಕ್ಷಣ ಆಯೋಗ ಆ ಬಗ್ಗೆ ತೀವ್ರವಾಗಿ ಪರ್ಯಾಲೋಚಿಸಿ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಧಾರ್ಮಿಕ ಶಿಕ್ಷಣ ನೀಡುವ ಅಗತ್ಯವನ್ನು ತನ್ನ ವರದಿಯಲ್ಲಿ ಸೇರಿಸಿತು. ನಿತ್ಯದ ಕಾರ್ಯಕ್ರಮಗಳನ್ನು ಆರಂಭಿಸುವ ಮುನ್ನ ಎಲ್ಲ ಶಿಕ್ಷಣ ಸಂಸ್ಥೆಗಳೂ ಮೌನ ಮತ್ತು ಧ್ಯಾನಗಳಿಗೂ ಸಾಮೂಹಿಕ ಪ್ರಾರ್ಥನೆಗೂ ಕೆಲಸಮಯವನ್ನು ವಿನಿಯೋಗಿಸಬೇಕೆಂದು ಸೂಚಿಸಿತು. ಕಾಲೇಜಿನಲ್ಲಿ ಮೊದಲ ವರ್ಷ ಪ್ರಮುಖ ಧರ್ಮಗಳ ಸ್ಥಾಪಕರ ಜೀವನಚರಿತ್ರೆಯನ್ನು ಎರಡನೆಯ ವರ್ಷದಲ್ಲಿ ವಿವಿಧ ಧರ್ಮಗಳ ಮೂಲಭೂತತತ್ತ್ವಗಳನ್ನು ಪರಿಚಯಮಾಡಿಕೊಡಬೇಕೆಂದೂ ಮೂರನೆಯ ವರ್ಷದಲ್ಲಿ ವಿವಿಧ ಮತಗಳ ತತ್ತ್ವಗಳನ್ನು ತುಲನಾತ್ಮಕ ದೃಷ್ಟಿಯಿಂದ ಬೋಧಿಸಬೇಕೆಂದೂ ಸೂಚಿಸಿತು. ಧಾರ್ಮಿಕ ತಳಹದಿಯ ಮೇಲೆ ರೂಪುಗೊಂಡಿರುವ ಭಾರತೀಯ ಸಂಸ್ಕøತಿ ನಾಗರಿಕತೆಗಳನ್ನು ಶಾಲೆಗಳಲ್ಲಿ ಬೋಧಿಸದಿರುವುದು ರಾಷ್ಟ್ರಕ್ಕೆ ಅಪಚಾರವೆಸಗಿದಂತಾಗುತ್ತದೆಂದು ಎಚ್ಚರಿಸಿತು. 

	ಶಾಲೆಗಳಲ್ಲಿ ಧಾರ್ಮಿಕ ಶಿಕ್ಷಣವನ್ನು ಶಿಕ್ಷಣದ ಅಂಗವಾಗಿ ಸೇರಿಸುವ ಅಗತ್ಯವನ್ನು ಗಾಂಧೀಜಿಯವರೂ ಒತ್ತಿ ಹೇಳಿದರು. ಆದರೆ ಯಾವೊಂದು ಮತಕ್ಕೆ ಸಂಬಂಧಿಸಿದಂತೆ ಅದನ್ನು ಬೋಧಿಸುವುದರ ಅಪಾಯವನ್ನವರು ಮನಗಂಡಿದ್ದರು. ಆ ಕಾರ್ಯವನ್ನು ಆಯಾ ಮತ ಸಂಸ್ಥೆಗಳಿಗೆ ಬಿಟ್ಟು ಶಾಲಾಕಾಲೇಜುಗಳು ಎಲ್ಲಧರ್ಮಗಳಿಗೂ ಮಾನ್ಯವೆನಿಸುವ ಸಾರ್ವತ್ರಿಕ ಸತ್ಯದ ರೂಪದಲ್ಲಿ ಬೋಧಿಸಬೇಕೆಂದು ಸಲಹೆ ಮಾಡಿದವರು. ರವೀಂದ್ರನಾಥ ಠಾಕೂರರೂ ಶಾಲೆಯ ಕಾರ್ಯಕ್ರಮಗಳು ಧಾರ್ಮಿಕ ಮುನ್ನಲೆಯಲ್ಲಿ ನಡೆಯಬೇಕೆಂದು ಭಾವಿಸಿ ತಾವು ಸ್ಥಾಪಿಸಿದ ವಿಶ್ವಭಾರತಿಯಲ್ಲಿ ಪ್ರಾಚೀನ ಗುರುಕುಲಗಳ ಪರಿಸರವನ್ನು ನೆಲೆಗೊಳಿಸಿದ್ದರು. ಭಾರತೀಯ ಸಂಸ್ಕøತಿಯನ್ನು ಪೋಷಿಸುವ ಹಾಗೂ ಸಂವರ್ಧಿಸುವ ಕಾರ್ಯಕ್ರಮಗಳಿಗೆ ಪ್ರಾಶಸ್ತ್ಯವಿತ್ತರು. ಒಂದು ದೃಷ್ಟಿಯಲ್ಲಿ ಶಾಲಾಕಾಲೇಜುಗಳಲ್ಲಿ ನೀಡತಕ್ಕ ಎಲ್ಲ ಶಿಕ್ಷಣವೂ ಧಾರ್ಮಿಕ ಶಿಕ್ಷಣವೇ ಎಂಬ ಭಾವನೆ ಅವರಿಗಿತ್ತು. ನಿತ್ಯವೂ ಅಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ಮೌನ ಹಾಗೂ ಧ್ಯಾನಕ್ಕೆ ಅವಕಾಶ ಕಲ್ಪಿಸಿದ್ದರು. ಇದರಿಂದ ವಿದ್ಯಾರ್ಥಿಗಳು ಆತ್ಮಸಂಯಮ ಸಾಧಿಸಬಹುದೆಂದು ಅವರು ಭಾವಿಸಿದ್ದರು. ಪ್ರಾರ್ಥನೆ, ನೈರ್ಮಲ್ಯ, ಭಾರತೀಯ ಸಾಹಿತ್ಯ ಸಂಸ್ಕøತಿ ಕಲೆಗಳು, ನಿಸರ್ಗದ ಸನ್ನಿವೇಶ-ಇವೆಲ್ಲವನ್ನೂ ಆ ದೃಷ್ಟಿಯಿಂದಲೇ ಕಾರ್ಯಕ್ರಮದಲ್ಲಿ ಅಳವಡಿಸಿಕೊಂಡಿದ್ದರು.

	1960ರಲ್ಲಿ ಕೇಂದ್ರ ಶಿಕ್ಷಣ ಸಲಹಾ ಮಂಡಲಿ ನೇಮಿಸಿದ ಪ್ರಕಾಶಮ್ ಸಮಿತಿ ಶಾಲಾಕಾಲೇಜುಗಳಲ್ಲಿ ಧಾರ್ಮಿಕಶಿಕ್ಷಣ ಸೇರಿಸುವ ಅಗತ್ಯ ಒಪ್ಪಿಕೊಂಡು ಎಲ್ಲ ಧರ್ಮಗಳ ಸಂಸ್ಥಾಪಕರ ತತ್ತ್ವ ಸಿದ್ಧಾಂತ ವ್ರತಾಚರಣೆಗಳನ್ನು ತುಲನಾತ್ಮಕವಾಗಿ ಅಳವಡಿಸಿ ಮಕ್ಕಳಿಗೆ ಬೋಧಿಸಬೇಕೆಂದು ಸೂಚಿಸಿತು. ಈ ಸಮಿತಿ ವಿಶ್ವವಿದ್ಯಾಲಯ ಸೂಚಿಸಿದ್ದ (1948) ಮೌನ, ಧ್ಯಾನ, ಪ್ರಾರ್ಥನೆ ಮುಂತಾದ ಅಂಶಗಳನ್ನು ಒಪ್ಪಿಕೊಂಡು ಆ ಶಿಕ್ಷಣವನ್ನು ಸ್ನಾತಕೋತ್ತರ ತರಗತಿಗಳಿಗೂ ವಿಸ್ತರಿಸಬೇಕೆಂದು ಸೂಚಿಸಿತು. ಒಟ್ಟಿನಲ್ಲಿ ಧಾರ್ಮಿಕ ಮತ್ತು ನೈತಿಕಶಿಕ್ಷಣವನ್ನು ಪ್ರಾಥಮಿಕ ಶಾಲೆಯಲ್ಲೇ ಆರಂಭಿಸಿ ಇಡೀ ಶಿಕ್ಷಣ ವ್ಯವಸ್ಥೆಯಲ್ಲಿ ಅದು ವ್ಯಾಪಿಸುವಂತೆ ಬೋಧಿಸಬೇಕೆಂಬ ಅಭಿಪ್ರಾಯ ಮಂಡಿಸಿತು.

	ಭಾವೈಕ್ಯದ ಬಗ್ಗೆ ಸಲಹೆ ನೀಡಲು 1961ರಲ್ಲಿ ನೇಮಕವಾಗಿದ್ದ ಸಂಪೂರ್ಣಾನಂದ ಸಮಿತಿ ತನ್ನ ವರದಿಯಲ್ಲಿ ಧಾರ್ಮಿಕ ಶಿಕ್ಷಣಕ್ಕೆ ಅಪ್ರತ್ಯಕ್ಷವಾಗಿ ತನ್ನ ಒಪ್ಪಿಗೆ ಸೂಚಿಸಿ ಭಾವೈಕ್ಯದ ಸಾಧನೆಗೆ ಅದು ನೆರವಾಗಬಲ್ಲವೆಂಬ ಅಭಿಪ್ರಾಯ ವ್ಯಕ್ತಪಡಿಸಿತು.

	1964ರಲ್ಲಿ ನೇಮಕವಾದ ಕೊಠಾರಿ ಶಿಕ್ಷಣ ಆಯೋಗ ನೈತಿಕ, ಸಾಮಾಜಿಕ, ಹಾಗೂ ಆಧ್ಯಾತ್ಮಿಕಮೌಲ್ಯಗಳು ಶಿಕ್ಷಣದ ಉದ್ದೇಶದ ಅವಿಭಾಜ್ಯ ಅಂಗವಾಗಿರಬೇಕೆಂದು ಭಾವಿಸಿ ಧಾರ್ಮಿಕ ಶಿಕ್ಷಣ ಬೋಧನಾಂಗದಲ್ಲಿ ಒಂದಾಗಿರಬೇಕೆಂದೂ ಅದಕ್ಕಾಗಿ ಪ್ರತ್ಯೇಕ ಕಾಲವನ್ನು ಮೀಸಲಿಡಬೇಕೆಂದೂ ಸೂಚಿಸಿತು. ಧರ್ಮ ಮಾನವನ ಸಂಸ್ಕøತಿಯನ್ನು ಬೆಳೆಸುವುದರಲ್ಲಿ ವಹಿಸಿರುವ ಪಾತ್ರವನ್ನು ಜೀವನದಲ್ಲಿ ಅದು ನೀಡುವ ಶಾಂತಿ, ಸಂತೃಪ್ತಿ, ಆನಂದ ಮುಂತಾದ ಮಾನವೀಯ ಫಲಗಳನ್ನು ಸೂಚಿಸಿ ಆ ಕಾರ್ಯಕ್ರಮವನ್ನು ಅನಿಷ್ಠಾನಕ್ಕೆ ತರಲು ವಿವರವಾದ ಪ್ರಣಾಲಿಕೆಯನ್ನೇ ನೀಡಿತು. ಇದಕ್ಕಾಗಿ ಬೇಕಾಗುವ ಪಠ್ಯಪುಸ್ತಕಗಳ ಸ್ವರೂಪವನ್ನೂ ನಿರ್ಧರಿಸಿತು. 

	ಕರ್ನಾಟಕದ ಶಾಲಾಕಾಲೇಜುಗಳಲ್ಲಿ ಧಾರ್ಮಿಕ ಶಿಕ್ಷಣ : ಕರ್ನಾಟಕ ರಾಜ್ಯಶಾಲೆಗಳಲ್ಲೂ ನೈತಿಕ ಮತ್ತು ಧಾರ್ಮಿಕಶಿಕ್ಷಣಕ್ಕೆ 1969-70ನೆಯ ವರ್ಷದಿಂದ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ವಿವರವಾದ ಪಠ್ಯ ವಿಷಯ ರಚಿಸಿ ವೇಳಾಪಟ್ಟಿಯಲ್ಲಿ ನಿರ್ದಿಷ್ಟಕಾಲ ಕಾಯ್ದಿರಿಸುವಂತೆಯೂ ಸೂಚಿಸಿದೆ. ಪ್ರಸ್ತುತ ಪ್ರೌಢಶಾಲೆಯ ಹಂತದಲ್ಲಿ ಆಚರಣೆಯಲ್ಲಿರುವ ಈ ಪಠ್ಯಕ್ರಮ 8ನೆಯ ತರಗತಿಯಲ್ಲಿ ಧಾರ್ಮಿಕ ಮಹಾಪುರುಷರ ಜೀವನವನ್ನೂ 9ನೆಯ ತರಗತಿಯಲ್ಲಿ ವಿವಿಧ ಧರ್ಮಗ್ರಂಥಗಳ ಯೋಗ್ಯ ಭಾಗಗಳ ಅಧ್ಯಯನವನ್ನೂ 10ನೆಯ ತರಗತಿಯಲ್ಲಿ ಜೀವನದ ವಿವಿಧ ಕ್ಷೇತ್ರಗಳ ಮೇಲೆ ಧರ್ಮದ ಪ್ರಭಾವವನ್ನೂ ಬೋಧಿಸಲಾಗುತ್ತಿದೆ. ಧಾರ್ಮಿಕ ಹಾಗೂ ನೈತಿಕಶಿಕ್ಷಣಕ್ಕಾಗಿ ವೇಳಾಪಟ್ಟಿಯಲ್ಲಿ ವಾರಕ್ಕೆ ಒಂದು ಅವಧಿಯಂತೆ ವರ್ಷಕ್ಕೆ 30 ಅವಧಿಗಳನ್ನು ಮೀಸಲಿಟ್ಟದೆ. ಇದರಲ್ಲಿ 20 ಅವಧಿಗಳನ್ನು ಧಾರ್ಮಿಕ ಮಹಾಪುರುಷ ಜೀವನ ಮತ್ತು ಪವಿತ್ರಗ್ರಂಥಗಳ ಅಧ್ಯಯನಕ್ಕೂ ಧರ್ಮದ ಪ್ರಭಾವದ ವ್ಯಾಸಂಗಕ್ಕಾಗಿ 3 ಅವಧಿಗಳನ್ನೂ ಧಾರ್ಮಿಕ ಚಟುವಟಿಕೆಗಳಿಗಾಗಿ 7ಅವಧಿಗಳನ್ನೂ ಗೊತ್ತುಪಡಿಸಿದೆ. ಧಾರ್ಮಿಕ ಚಟುವಟಿಕೆಗಳಿಗೆ ಶಾಲೆಯ ಮಕ್ಕಳನ್ನೆಲ್ಲ ಒಟ್ಟುಗೂಡಿಸಬಹುದಾದ ಅವಕಾಶವನ್ನೂ ಕಲ್ಪಿಸಿದೆ. ಆಸ್ಪತ್ರೆ, ಮಠ, ಮತಾಚಾರ್ಯರ ಪೀಠಗಳು-ಮುಂತಾದವುಗಳ ಸಂದರ್ಶನವೂ ಸಾಮೂಹಿಕ ಚಟುವಟಿಕೆಗಳಲ್ಲಿ ಸೇರಿಸಿದೆ. ಹರಿಕಥೆ, ಶಿವಕಥೆ, ಧಾರ್ಮಿಕ ಪ್ರವಚನ ಮುಂತಾದವನ್ನೂ ಏರ್ಪಡಿಸಬಹುದೆಂದು ಸೂಚಿಸಿದೆ. 

	ಬೋಧನ ಕ್ರಮ : ನೈತಿಕ ಹಾಗೂ ಧಾರ್ಮಿಕಶಿಕ್ಷಣಕ್ಕೆ ವಿಶಿಷ್ಟ ಎನ್ನಬಹುದಾದ ಎರಡುಬೋಧನ ಪದ್ಧತಿಗಳು ಪ್ರಚಾರದಲ್ಲಿವೆ. ಇದಕ್ಕಾಗಿ ಪ್ರತ್ಯೇಕ ಅಧ್ಯಾಪಕರನ್ನು ನೇಮಿಸಿಕೊಳ್ಳದೆ ಪಠ್ಯಕ್ರಮದ ಇತರ ವಿಷಯಗಳನ್ನು ಬೋಧಿಸತಕ್ಕ ಅಧ್ಯಾಪಕರು ತಮ್ಮ ತಮ್ಮ ವಿಷಯಕ್ಕೆ ಸಂಬಂಧಿಸಿದಂತೆ ಅಂದಂದಿಗೆ ಬರತಕ್ಕ ಅಂಶಗಳನ್ನು ಮಕ್ಕಳು ಅರಿತುಕೊಂಡು ಅನಿಷ್ಠಾನಕ್ಕೆ ತರುವಂತೆ ಮಾಡಬೇಕು ಎನ್ನವುದು ಒಂದು ಪದ್ಧತಿ. 

	ವೇಳಾಪತ್ರಿಕೆಯನ್ನು ಅನುಸರಿಸಿ ನೇರವಾಗಿ ಪಠ್ಯಕ್ರಮದಲ್ಲಿ ಸೂಚಿಸಿರುವಂತೆ ನೈತಿಕ ಮತ್ತು ಧಾರ್ಮಿಕ ಶಿಕ್ಷಣವನ್ನು ಆಯಾ ತರಗತಿಗೆ ಪ್ರತ್ಯೇಕವಾಗಿ ಬೋಧಿಸುವುದು ಪ್ರಚಾರದಲ್ಲಿರುವ ಇನ್ನೊಂದು ಕ್ರಮ. ಪ್ರಾಥಮಿಕ ಶಾಲೆಗಳಲ್ಲಿ ಮತಾಚಾರ್ಯರ ಜೀವನವನ್ನೂ ಅವರು ಬೋಧಿಸಿದ ತತ್ತ್ವಗಳ ಮಹತ್ತ್ವವನ್ನೂ ಕಥಾರೂಪದಲ್ಲಿ ಬೋಧಿಸುವುದು ವಾಡಿಕೆಯಲ್ಲಿದೆ. 

	ಮುಖ್ಯವಾಗಿ ಧಾರ್ಮಿಕ ಶಿಕ್ಷಣ ಬೋಧಿಸುವ ವಿಧಾನ ಶಾಲೆಗಳಲ್ಲಿ ಯಶಸ್ವಿಯಾಗಬೇಕಾದರೆ ವಿದ್ಯಾರ್ಥಿಗಳ ಶಾಲೆಯ ಹೊರಗಿನ ಪರಿಸರವೂ ಅದಕ್ಕೆ ಅನುಗುಣವಾಗಿರಬೇಕು. ಮನೆಯಲ್ಲಿ ತಂದೆತಾಯಿಗಳು ಮಕ್ಕಳಲ್ಲಿ ದೈವಭಕ್ತಿ, ಶುಚಿತ್ವ, ಪ್ರಾಮಾಣಿಕತೆ, ಪರೋಪಕಾರಬುದ್ಧಿ, ದಯೆ ಮುಂತಾದ ಸದ್ಗುಣಗಳು ಬೆಳೆಯುವಂತೆ ನೋಡಿಕೊಳ್ಳಬೇಕು. ಸುತ್ತಲಿನ ಸಾಮಾಜಿಕ ಸಂಘ ಸಂಸ್ಥೆಗಳೂ ಈ ದಿಶೆಯಲ್ಲಿ ಪ್ರೋತ್ಸಾಹ ನೀಡುವಂತಿರಬೇಕು. 

	ಸಮಸ್ಯೆಗಳು : ವಿಶಾಲ ಭಾರತದಲ್ಲಿ ಹಲವಾರು ಮತಧರ್ಮಗಳು ಅಸ್ತಿತ್ವದಲ್ಲಿವೆ. ಶಾಲೆಗಳಲ್ಲಿ ಎಲ್ಲ ಧರ್ಮದ ಮಕ್ಕಳೂ ಇರುತ್ತಾರೆ. ಆದ್ದರಿಂದ ಯಾವೊಂದು ಧರ್ಮದ ವಿಶಿಷ್ಟ ಬೋಧನೆ ಮಾಡಿದರೂ ಉಳಿದವರಿಗೆ ಅದು ಒಗ್ಗಲಾರದು. ಆದ್ದರಿಂದ ಎಲ್ಲ ಮತಗಳ ಸಾರಸಂಗ್ರಹರೂಪದ ತತ್ತ್ವಗಳನ್ನು ಮಾತ್ರ ಬೋಧಿಸುವುದು ವಿಹಿತ ಎಂದು ಭಾವಿಸಿದರೂ ಅದರಲ್ಲಿ ಯಾವ ಮತದ ವಿದ್ಯಾರ್ಥಿಗೂ ಆಸಕ್ತಿ ಮೂಡದಿರಬಹುದು. ಅಲ್ಲದೆ ಅಧ್ಯಾಪಕರು ಆ ಕಾರ್ಯವನ್ನು ಎಸಗುವಾಗ ಅವರ ಬೋಧನೆಯಲ್ಲಿ ತಮ್ಮ ಮತದ ಪಕ್ಷಪಾತದಿಂದ ದೂರವಿರುವುದು ಸಾಧ್ಯವಾಗದಿರಬಹುದು. ಮೇಲಾಗಿ ಅಂಥ ಸರ್ವಸಾಮಾನ್ಯ ಪಠ್ಯಕ್ರಮ ರಚಿಸುವುದೂ ದುಸ್ಸಾಧ್ಯ ಎನಿಸಬಹುದು.

	ಧಾರ್ಮಿಕ ಬೋಧನೆ ಬಲುಮಟ್ಟಿಗೆ ಶಿಕ್ಷಕರ ಆದರ್ಶವನ್ನು ಅವಲಂಬಿಸಿರುತ್ತದೆ. ತಾವೇ ಅನುಸರಿಸದ ತತ್ತ್ವಸಿದ್ಧಾಂತಗಳನ್ನು ಮಕ್ಕಳಿಗೆ ಬೋಧಿಸುವುದರಿಂದ ಧಾರ್ಮಿಕಶಿಕ್ಷಣ ಪರಿಣಾಮಕಾರಿ ಎನಿಸದು. ಆದರ್ಶ ಅಧ್ಯಾಪಕರು ತಕ್ಕ ಸಂಖ್ಯೆಯಲ್ಲಿ ದೊರೆಯುವುದು ದುರ್ಲಭ. 

	ಈ ಎಲ್ಲ ತೊಡಕುಗಳಿಗೆ ಸಿಲುಕಿದ ಧಾರ್ಮಿಕಶಿಕ್ಷಣ ಯಾವದೇಶದಲ್ಲೂ ಪರಿಣಾಮಕಾರಿಯಾಗಿ ಆಚರಣೆಗೆ ಬಾರದಾಗಿದೆ. ಭಾರತದ ರಾಜ್ಯಾಂಗದಲ್ಲಿ ಯಾವ ಸರ್ಕಾರಿ ಶಾಲಾ ಕಾಲೇಜುಗಳಲ್ಲೂ ಯಾವ ಒಂದು ಧರ್ಮದ ಬೋಧನೆಗೆ ಅವಕಾಶಕೊಟ್ಟಿಲ್ಲ. ಇದು ಧರ್ಮದ ಬಗ್ಗೆ ವಿರೋಧವಾಗಲಿ ತಿರಸ್ಕಾರವಾಗಲಿ ಅಲ್ಲ. ಜಾತ್ಯತೀತ ರಾಷ್ಟ್ರವಾದ ಭಾರತದಲ್ಲಿ ಎಲ್ಲ ಧರ್ಮಗಳಿಗೂ ಸಮಾನ ಗೌರವವುಂಟು. ಆದರೆ ಧಾರ್ಮಿಕ ಸಂಸ್ಥೆಗಳು ಆ ಕಾರ್ಯವನ್ನು ನಿರ್ವಹಿಸಬಹುದು. ಶಾಲಾಕಾಲೇಜುಗಳು ಎಲ್ಲ ಧರ್ಮಗಳ ಮೂಲತತ್ತ್ವಗಳನ್ನೂ ಹಾಗೂ ಸಾರ್ವಕಾಲಿಕ ಎನಿಸಿದ ಸಾರ್ವತ್ರಿಕ ತತ್ತ್ವಗಳನ್ನೂ ಅಭ್ಯಾಸದ ದೃಷ್ಟಿಯಿಂದ ಸಮನ್ವಯ ದೃಷ್ಟಿಯಿಂದ ವ್ಯಾಸಂಗಮಾಡಲು ಅವಕಾಶವುಂಟು. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ